ಯೋಜನೆ	 -
 ಗೊತ್ತಾದ ಕಾರ್ಯಸಾಧನೆಗೆ ವ್ಯವಸ್ಥಿತ ಮಾರ್ಗವನ್ನು ರೂಪಿಸಿ ಮುನ್ನಡೆಯುವುದು ಯೋಜನೆ (ಪ್ಲಾನಿಂಗ್). ಮಾಡುವ ಕೆಲಸವನ್ನು ಮುಂದಾಗಿ ಯೋಚಿಸಿ ಒಂದು ಗೊತ್ತಾದ ಸ್ಥಿತಿ ನಿರ್ಮಿಸುವುದು ಯೋಜನೆ. ಆರ್ಥಿಕ, ಸಾಮಾಜಿಕ, ಭೌಗೋಳಿಕ, ನಿರ್ಮಾಣ, ನಗರಾಭಿವೃದ್ಧಿ ಮುಂತಾದ ಅನೇಕ ಯೋಜನೆಗಳಿವೆ. ಈಗಿನ ಸರ್ವಕ್ಷೇತ್ರಗಳಲ್ಲೂ ಒಂದು ಕ್ರಮಬದ್ಧ ಯೋಜನೆಯನ್ನು ನಾವು ಕಾಣುತ್ತೇವೆ. ಸರ್ಕಾರಗಳು, ದೇಶಗಳು ತಮ್ಮ ಅಭಿವೃದ್ಧಿಗೆ, ರಕ್ಷಣೆಗೆ ಯೋನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ರಷ್ಯ, ಭಾರತ ಮುಂತಾದ ದೇಶಗಳ ಪಂಚವಾರ್ಷಿಕ ಯೋಜನೆಗಳು. ಹಾಗೆಯೇ ದೊಡ್ಡ ಕೈಗಾರಿಕೋದ್ಯಮಿಗಳು ತಮ್ಮ ಉತ್ಪಾದನೆಗೆ, ಮಾರುಕಟ್ಟೆಗೆ ಮತ್ತು ವಸ್ತುಗಳ ಬೇಡಿಕೆಯನ್ನು ಕಾಯ್ದುಕೊಳ್ಳಲು ಯೋಜನೆಗಳನ್ನು ರೂಪಿಸುತ್ತಾರೆ. ಹಾಗೆಯೇ ಇಂದು ಯೋಜನೆ (ಪ್ಲಾನ್) ಎಂಬುದು ಪ್ರತಿ ವ್ಯಕ್ತಿಯ ಜೀವನದಲ್ಲೂ ಸೇರಿಹೋಗಿದೆ. ಈ ಯೋಜನೆಗಳ ಸಫಲತೆ-ವಿಫಲತೆಯ ಮೇಲೆ ಸರ್ಕಾರಗಳು, ವ್ಯಕ್ತಿಗಳು, ಕೈಗಾರಿಕೋದ್ಯಮಗಳು ಅಭಿವೃದ್ಧಿಯತ್ತ ಇಲ್ಲ ಅವಸಾನದತ್ತ ಸಾಗುತ್ತವೆ. ಕಾಲ, ಹಣ, ಶಕ್ತಿ ಮತ್ತು ವಸ್ತು ಇವುಗಳ ಬಳಕೆಯಲ್ಲಿ ಸಮನ್ವಯ ಸಾಧಿಸಿ ಉದ್ದೇಶಿತ ಗುರಿ ಸಾಧನೆಗೆ ಯೋಜನೆ ಬಹು ಅಗತ್ಯ. ಭಾರತದ ಸಮಗ್ರ ಅಭಿವೃದ್ಧಿಗಾಗಿ ಭಾರತ ಸರ್ಕಾರ 1950ರಲ್ಲೇ ಯೋಜನಾ ಆಯೋಗವನ್ನು ರಚಿಸಿದೆ. 
(ನೋಡಿ- ಪಂಚವಾರ್ಷಿಕ-ಯೋಜನೆಗಳು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ